ಅಭಿಪ್ರಾಯ / ಸಲಹೆಗಳು

ಆಸ್ತಿ ಮಾಲೀಕತ್ವ ಮತ್ತು ದಸ್ತಾವೇಜುಗಳ ನೋಂದಣಿ ಕುರಿತು ಮಾಹಿತಿ

 

ಪ್ರ 1

ಸ್ಥಿರಾಸ್ತಿಯ ಮಾಲೀಕತ್ವವನ್ನು ಒಬ್ಬ ವ್ಯಕ್ತಿ ಯಾವ ರೀತಿ ಪಡೆಯಬಹುದು?

ಉತ್ತರ

·         ವಂಶಪಾರಂಪರ್ಯದಿಂದ ಬಂದ ಆಸ್ತಿಗಳನ್ನು ವಾರಸುದಾರರ ಹಕ್ಕಿನ ಮೂಲಕ

·         ಮರಣ ಶಾಸನ ಪತ್ರಗಳ ಮೂಲಕ

·          ಸ್ವರ್ಯಾಜನೆ ಮೂಲಕ ಖರೀದಿ ಇತ್ಯಾದಿ

·         ದಾನ, ಟ್ರಸ್ಟ, ವ್ಯವಸ್ಥಾ ಪತ್ರಗಳ ಮೂಲಕ

·         ಸರ್ಕಾರದಿಂದ ಅನುದಾನ, ಇನಾಮು ಮೂಲಕ

·         ಕೋರ್ಟ್ ಡಿಕ್ರಿ ಮೂಲಕ

ಮಾಲೀಕತ್ವವನ್ನು ಪಡೆಯಬಹುದಾಗಿದೆ. ಅಂದರೆ ಆಸ್ತಿಯ ಮಾಲೀಕತ್ವವನ್ನು ಎರಡು ವಿಧದಲ್ಲಿ ಪಡೆಯುತ್ತಾರೆ.

1.      ಜನರು ತಮ್ಮ ತಮ್ಮಲ್ಲಿ ಮಾಡಿಕೊಂಡ  ವ್ಯವಹಾರಳಿಂದಾಗಿ ನಡೆಯುವುದು. ಉದಾಹರಣೆ : ಖರೀದಿ, ದಾನ, ಇತ್ಯಾದಿ ವ್ಯವಹಾರಗಳ ಮೂಲಕ.

2.     ಕಾನೂನಿನ ನಡವಳಿ ಮೂಲಕ ಉದಾಹರಣೆ: ವಾರಸಾ, ಕೋರ್ಟ್ ಡಿಕ್ರಿ ಇತ್ಯಾದಿ (ಹೆಚ್ಚಿನ ವಿವರಗಳಿಗೆ ಆಸ್ತಿ ಹಸ್ತಾಂತರ ಕಾಯಿದೆ 1882 (ಕೇಂದ್ರ ಕಾನೂನು) ನೋಡಿರಿ)

ಪ್ರ 2

ವಾರಸುದಾರರ ಹಕ್ಕಿನ ಮೂಲಕ ಬಂದ ಆಸ್ತಿಯ ಖಾತೆ ವರ್ಗಾವಣೆ ಮಾಡಿಸಿಕೊಳ್ಳಲು ಉಪನೋಂದಣಿ ಕಛೇರಿಯಲ್ಲಿ ನೋಂದಣಿ ಮಾಡಿಸಬೇಕಾಗುತ್ತದೆಯೇ?

ಉತ್ತರ

ನೋಂದಣಿ ಅಗತ್ಯವಿಲ್ಲ. ಆಸ್ತಿಯ ಮಾಲೀಕನ ಮರಣಾ ನಂತರ ಆತನ ಹೆಂಡತಿ ಮತ್ತು ಮಕ್ಕಳು  ಅಂದರೆ ಗಂಡು ಮತ್ತು ವಿವಾಹಿತ/ ಅವಿವಾಹಿತ ಹೆಣ್ಣು ಮಕ್ಕಳು ನೇರ ವಾರಸುದಾರರಾಗುತ್ತಾರೆ.  ಮರಣ ಹೊಂದಿದ ವ್ಯಕ್ತಿಯ ಮರಣ ದೃಢೀಕರಣ (ಮರಣ ಉತ್ತರ) ಸರ್ಟಿಫೀಕೇಟ್ ನೊಂದಿಗೆ ಆಸ್ತಿಯ ವಿವರಗಳನ್ನು ಮತ್ತು ಅರ್ಜಿಯನ್ನು ಪ್ರಮಾಣ ಪತ್ರದೊಂದಿಗೆ ಈ ಕೆಳಕಂಡ ಅಧಿಕಾರಿಗಳಿಗೆ ಸಲ್ಲಿಸಿ ಖಾತೆ ವರ್ಗಾವಣೆ ಮಾಡಿಸಿಕೊಳ್ಳಬಹುದು.

ಎ) ಕೃಷಿ ಜಮೀನುಗಳಿದ್ದಲ್ಲಿ: ಕಂದಾಯ ಇಲಾಖೆಯ ತಹಶೀಲ್ದಾರರಿಗೆ (ಭೂ ಕಂದಾಯ  ಕಾಯಿದೆ 1964 ಕಲಂ 128 ನೋಡಿ)

ಬಿ) ನಿವೇಶನ ಮನೆಗಳಾಗಿದ್ದಲ್ಲಿ ಆಸ್ತಿ ಇರುವ ಪ್ರದೇಶದ ಮಹಾನಗರ ಪಾಲಿಕೆ, ನಗರಸಭೆ, ಗ್ರಾಮ ಪಂಚಾಯಿತಿ, ಸಿಟಿ ಸರ್ವೆ ಇದ್ದಲ್ಲಿ ಸಿಟಿ ಸರ್ವೆ ಕಛೇರಿಗೆ ಅರ್ಜಿ ಸಲ್ಲಿಸಬೇಕು.

ಪ್ರ 3

ಯಾವ ದಸ್ತಾವೇಜುಗಳನ್ನು ಕಡ್ಡಾಯವಾಗಿ ನೋಂದಾಯಿಸಬೇಕಾಗುತ್ತದೆ?

ಉತ್ತರ

1.   ಸ್ಥಿರ ಆಸ್ತಿಯ ದಾನ ಪತ್ರಗಳು

2.   ಒಂದು ನೂರು ರೂಪಾಯಿಗಳ ಮತ್ತು ಅದರ ಮೇಲ್ಪಟ್ಟ ಮೌಲ್ಯದ ಸ್ಥಿರಾಸ್ತಿಗೆ ಸಂಬಂಧಪಟ್ಟಂತೆ ಹಕ್ಕು ಸ್ವಾಮ್ಯ ಹಾಗೂ ಹಿತಾಸಕ್ತಿಯನ್ನು (Right tittle and interest) ಈಗಾಗಲಿ, ಅಥವಾ ಮುಂದಾಗಲಿ ಸೃಜಿಸಲು, ಘೋಷಿಸಲು, ಹಸ್ತಾಂತರಿಸಲು ಪರಿಮಿತಗೊಳಿಸಲು ಅಥವಾ ಅಂತ್ಯಗೊಳಿಸುವಂತೆ ತಾತ್ಪರ್ಯವಾಗುವಂತಹ  ತಕ್ಷಣವೇ ಜಾರಿಯಲ್ಲಿ ಬರುವಂತಹ ದಸ್ತಾವೇಜುಗಳು.

3.   ಸ್ಥಿರಾಸ್ತಿಯಲ್ಲಿ ಯಾವುದೇ ಹಕ್ಕು ಸ್ವಾಮ್ಯ ಅಥವಾ ಹಿತಾಸಕ್ತಿಯನ್ನು ಸೃಜಿಸುವ ಘೋಷಿಸುವ ಹಸ್ತಾಂತರಿಸಲು ಪರಿಮಿತಗೊಳಿಸಲು ಅಥವಾ ಅಂತ್ಯಗೊಳಿಸುವಂತೆ ಕಾರಣದಿಂದಾಗಿ ಯಾವುದೇ ಪ್ರತಿಫಲದ ಸ್ವೀಕಾರ ಅಥವಾ ಸಂದಾಯದ ತಕ್ಷಣವೇ ಜಾರಿಯಲ್ಲಿ ಬರುವಂತಹ ದಸ್ತಾವೇಜುಗಳು.

ಪ್ರ 4

ಆಸ್ತಿಗಳ ವಿಭಾಗ ಮಾಡಿಕೊಳ್ಳುವುದು ಹೇಗೆ?

ಉತ್ತರ

1.   (ಅ) ವಿಭಾಗ ಮಾಡಿಕೊಳ್ಳುವ ಆಸ್ತಿಗಳನ್ನು ವಿಭಾಗ ಮಾಡಿಕೊಳ್ಳಬಹುದು. ಈ  ವಿಭಾಗದಿಂದ  ಆಸ್ತಿಯಲ್ಲಿ  ಹಕ್ಕುಗಳು ಉತ್ಪನ್ನವಾಗಿ ಇಂತಹ ವಿಭಾಗವನ್ನು ದಸ್ತಾವೇಜಿನ ಮೂಲಕ ಜಾರಿಗೆ ತಂದ ಸಂದರ್ಭದಲ್ಲಿ ಈ ಹಿಸ್ಸಾ ಪತ್ರ ( ವಾಟ್ನಿ) / ವಿಭಾಗ ಪತ್ರವನ್ನು ಕಡ್ಡಾಯವಾಗಿ ನೋಂದಾಯಿಸಬೇಕಾಗುತ್ತದೆ.

(ಆ)  ಬಾಯಿ ಮಾತಿನ ಹಿಸ್ಸೆ ( Oral Partition) ಮಾಡಿಕೊಂಡು ನಂತರ ಸಂಬಂಧಪಟ್ಟ  ಅಧಿಕಾರಿಗಳಿಗೆ ವರದಿ ಮಾಡುವಂತಹ ಸಂದರ್ಭದಲ್ಲಿ  ಈ ವರದಿಯನ್ನು ನೋಂದಾಯಿಸುವ ಅಗತ್ಯವಿಲ್ಲ.

(ಇ) ಮೇಲೆ  ವಿವರಿಸಿದ ಯಾವುದೇ ರೀತಿಯಲ್ಲಿ ಮಾಡಿಕೊಂಡ  ಹಿಸ್ಸಾಪತ್ರ (ವಾಟ್ನಿ) / ವಿಭಾಗ ಪತ್ರಕ್ಕೆ ಈ ಪತ್ರ ನೋಂದಾಯಿಸುವಂತಹದಾಗಿರಲಿ ಅಥವಾ ನೋಂದಾಯಿಸದೆ ಇರುವಂತಹದ್ದಾಗಿರಲಿ ಮುದ್ರಾಂಕ ಶುಲ್ಕವನ್ನು ಕಡ್ಡಾಯವಾಗಿ ಪಾವತಿ ಮಾಡಬೇಕಾಗುತ್ತದೆ.

   (ಈ) ಹಿಸ್ಸೆ ಮಾಡಿಕೊಳ್ಳುವವರು ಪರಸ್ಪರ ಒಪ್ಪಂದದ ಪ್ರಕಾರ ಹಿಸ್ಸೆಯನ್ನು ಹೆಚ್ಚು ಕಡಿಮೆ ಮಾಡಿಕೊಳ್ಳಬಹುದು.

ಪ್ರ 5

ವಾರಸುದಾರರು ಇಬ್ಬರು ಹಾಗೂ ಅದಕ್ಕೂ ಹೆಚ್ಚು  ಜನ  ಇದ್ದಾಗ್ಯೂ ಒಬ್ಬ ಅಥವಾ  ಇಬ್ಬರನ್ನೆ ಪೂರ್ಣ ಮಾಲೀಕರನ್ನಾಗಿ  ಮಾಡಿ  ಉಳಿದವರು ತಮ್ಮ ಹಿಸ್ಸೆಯ ಬಾಬ್ತು ಹಣ ಪಡೆಯಬಹುದೇ?

ಉತ್ತರ

ಅ) ಪಡೆಯಬಹುದು ಆಸ್ತಿಯ ಒಟ್ಟು ಮಾಲೀಕರಲ್ಲಿ ಒಬ್ಬರಿಗೆ ಇನ್ನೊಬ್ಬರು ಅಥವಾ ಎಲ್ಲರೂ ಸೇರಿ ಇಬ್ಬರಿಗೆ ತಮ್ಮ ಹಕ್ಕನ್ನು ಬಿಟ್ಟುಕೊಟ್ಟು  ಒಬ್ಬರನ್ನು ಪೂರ್ಣ ಮಾಲೀಕರನ್ನಾಗಿ  ಮಾಡಬಹುದು. ಈ ಹಕ್ಕು ಖುಲಾಸೆಯನ್ನು ಹಣವನ್ನು ಪಡೆದಾಗಲಿ ಅಥವಾ ಪಡೆಯದೆಯೆ ಮಾಡಬಹುದು. ಇದಕ್ಕೆ ಹಕ್ಕು ಖುಲಾಸೆ ( Release ) ಎನ್ನುತ್ತಾರೆ.

ಆ) ಹಕ್ಕು ಖುಲಾಸೆಯನ್ನು ಪಿತ್ರಾರ್ಜಿತ ಆಸ್ತಿಗಳಿಗಲ್ಲದೆ  ಒಟ್ಟಾಗಿ ಖರೀದಿಸಿದ / ಪಡೆದ ಆಸ್ತಿಗಳ  ವಿಷಯದಲ್ಲಿಯೂ ಮಾಡಿಕೊಳ್ಳಬಹುದು.

ಪ್ರ 6

ಮರಣ ಶಾಸನ ಆ(ಉಯಿಲ್) / ಇಚ್ಛಾ ಪತ್ರವೆಂದರೇನು?

ಉತ್ತರ

ಒಬ್ಬ ವ್ಯಕ್ತಿಯು ತನ್ನ ಸಂಪೂರ್ಣ ಹಕ್ಕುಳ್ಳ ಆಸ್ತಿಯನ್ನು ತನ್ನ ಮರಣಾ ನಂತರ ಯಾರಿಗೆ ಸಲ್ಲಬೇಕು ಎನ್ನುವುದನ್ನು ಬರೆದಿಡುವುದಕ್ಕೆ ಮರಣ ಶಾಸನ (ಉಯಿಲ್) ಎನ್ನುತ್ತಾರೆ. ಮರಣ ಶಾಸನದ ಪ್ರಕಾರ ಆಸ್ತಿ ಯಾರಿಗೆ ಸೇರ ಬೇಕೆಂದು ಬರೆಯಲಾಗಿದೆಯೋ ಅವರಿಗೆ ಮರಣ ಶಾಸನ ಬರೆದ  ವ್ಯಕ್ತಿಯ ಮರಣಾ ನಂತರ ಸೇರುತ್ತದೆ.

ಪ್ರ 7

ಮರಣ ಶಾಸನವನ್ನು ಯಾರು ಬರೆದಿಡಬಹುದು?

ಉತ್ತರ

ಅ) ಅಲ್ಪವಯಿ (ಮೈನರ್) ಯನ್ನು ಹೊರತುಪಡಿಸಿ 19 ವರ್ಷಗಳ  ವಯಸ್ಸನ್ನು ಮೀರಿದ ಮತ್ತು ಮಾನಸಿಕ  ಸ್ವಾಸ್ಥ್ಯ ಹೊಂದಿರುವ ಯಾವುದೇ ವ್ಯಕ್ತಿ ಮರಣ ಶಾಸನವನ್ನು ಬರೆದಿಡಬಹುದು.

ಆದರೆ ವ್ಯಕ್ತಿಯೊಬ್ಬನ್ನು ಬೇರೆ  ಒಬ್ಬರ ಬೆದರಿಕೆಗೆ  ಪ್ರಲೋಭನೆಗೆ ಮರಳು ಮಾತಿಗೆ ಅಥವಾ ಮೋಸಕ್ಕೆ  ಒಳಗಾಗಿದ್ದ ಸಮಯದಲ್ಲಿ ಮಾಡಿದ ಮರಣ ಶಾಸನವು ಊರ್ಜಿತವಾಗುವುದಿಲ್ಲ. ಆದ್ದರಿಂದ  ಮರಣ ಶಾಸನ ಮಾಡುವ ವ್ಯಕ್ತಿಯು ಸಂಪೂರ್ಣವಾಗಿ ಸ್ವ ಇಚ್ಛೆಯಿಂದ ಮಾಡುವಂತಿರಬೇಕು.

ಆ) ಅಪ್ರಾಪ್ತ ವಯಸ್ಕರ ಬುದ್ಧಿಭ್ರಮಣೆಯಾದವರ ಪರವಾಗಿ ಅವರ ಪಾಲಕರು ಅಥವಾ ಸಂರಕ್ಷಣೆದಾರರು ಮರಣ ಶಾಸನವನ್ನು ಮಾಡುವಂತಿಲ್ಲ.

ಇ) ಮರಣ ಶಾಸನಕ್ಕೆ ಕನಿಷ್ಠ ಿಬ್ಬರು ವ್ಯಕ್ತಿಗಳು ಸಾಕ್ಷಿಗಳೆಂದು ಸಹಿ ಮಾಡಬೇಕು. ಈ ಇಬ್ಬರು ಸಾಕ್ಷಿದಾರರ ಸಮ್ಮುಖದಲ್ಲಿ ಮರಣ ಶಾಸನ ಬರೆದುಕೊಡುವವರು ಸಹಿ ಮಾಡಿದಾರೆಂದು  ಷರಾ ಬರೆಯಬೇಕು.

ಈ) ಬಿಕ್ಕಲಂದಾರ (ಪತ್ರ ಬರಹಗಾರ) ಸಾಕ್ಷಿ ಆಗುವುದಿಲ್ಲ. ಈತನನ್ನು ಹೊರತುಪಡಿಸಿ ಇಬ್ಬರು ಸಾಕ್ಷಿಗಳು ಸಹಿ ಹಾಕಬೇಕು.

ಉ) ಮರಣ ಶಾಸನದದ ಮೂಲಕ ಪ್ರಯೋಜನ ಪಡೆಯುವ ವ್ಯಕ್ತಿಯು ಮರಣ ಶಾಸನಕ್ಕೆ ಸಾಕ್ಷಿ ಹಾಕಬಾರದು. ಯಾಕೆಂದರೆ ಮರಣ ಶಾಸನದ ಮೂಲಕ ಪಡೆಯುವ ಪ್ರಯೋಜನ ರದ್ದಾಗುತ್ತದೆ.

ಮರಣ ಶಾಸನವು ವಿವಾದರಹಿತವಾಗಿ ಅನುಷ್ಠಾನಕ್ಕೆ ಬರಬೇಕಾದಲ್ಲಿ ಆಸ್ತಿಗಳ ವಿವರಗಳನ್ನು ಯಾವುದೇ ಸಂದಿಗ್ಥತೆ ಅಥವಾ ಅಸ್ಪಷ್ಟತೆ ಅವಕಾಶಕೊಡದಂತೆ ಸ್ಪಷ್ಟವಾಗಿ ಸರಿಯಾಗಿ ಬರೆಯಬೇಕು ಹಾಗೂ ಆಸ್ತಿ ಪಡೆಯುವ ವ್ಯಕ್ತಿಗಳ ವಿವರಗಳನ್ನು ನಮೂದಿಸಬೇಕು.

ಪ್ರ 8

ಮರಣ ಶಾಸನವನ್ನು ಕಡ್ಡಾಯವಾಗಿ ನೋಂದಾಯಿಸಬೇಕೇ?

ಉತ್ತರ

ಮರಣ ಶಾಸನವನ್ನು ನೋಂದಾಯಿಸುವುದು ಕಡ್ಡಾಯವಾಗಿರುವುದಿಲ್ಲ. ಮರಣ ಶಾಸನ ಬರೆದಿಡುವವರು ಇಚ್ಚೇಪಟ್ಟಲ್ಲಿ ನೋಂದಾಯಿಸಬಹುದು.

ಪ್ರ 9

ಮರಣ ಶಾಸನ (ಇಚ್ಚಾಪತ್ರ) ಯಾವ ಕಛೇರಿಯಲ್ಲಿ ನೋಂದಾಯಿಸಬೇಕು?

ಉತ್ತರ

ಭಾರತ ದೇಶದ ಯಾವುದೇ ಉಪನೋಂದಣಿ ಅಧಿಕಾರಿ / ಜಿಲ್ಲಾ ನೋಂದಣಾಧಿಕಾರಿಗಳ ಕಛೇರಿಯಲ್ಗಿ ನೋಂದಾಯಿಸಬಹುದು.

ಪ್ರ 10

ಮರಣ ಶಾಸನ (ಇಚ್ಚಾಪತ್ರ) ಬರೆದ ನಂತರ ಎಷ್ಟು ಕಾಲಾವಕಾಶದೊಳಗೆ ನೋಂದಣಿ ಮಾಡಿಸ ಬೇಕು?

ಉತ್ತರ

ನೋಂದಣಿ ಮಾಡಿಸಲಿಕ್ಕೆ ಕಾಲದ ಮಿತಿ ಇರುವುದಿಲ್ಲ.

ಪ್ರ 11

ಮರಣ ಶಾಸನ (ಇಚ್ಚಾಪತ್ರ) ರದ್ದುಪಡಿಸಬಹುದೇ?

ಉತ್ತರ

ಮರಣ ಶಾಸನ  ಮಾಡಿದ ವ್ಯಕ್ತಿಯು ತನ್ನ ಜೀವಿತ ಕಾಲದಲ್ಲಿ ಯಾವಾಗಲಾದರೂ ರದ್ದುಪಡಿಸಬಹುದು. ರದ್ದುಪಡಿಸಲು ನಿಗದಿತ ರೂ.100- ಮುದ್ರಾಂಕ ಶುಲ್ಕ ಪಾವತಿಸಬೇಕಾಗುತ್ತದೆ.

ಪ್ರ 12

ಮರಣ ಶಾಸನ (ಇಚ್ಚಾಪತ್ರ) ನೋಂದಣಿ ಆದ ಮೇಲೆ ಇದಕ್ಕೆ ತಿದ್ದುಪಡಿ ಅನುಬಂಧ ಮಾಡಬಹುದೇ?

ಉತ್ತರ

ಮರಣ ಶಾಸನ ಕರ್ತನು ಮರಣ ಶಾಸನದ ಯಾವುದೇ ಅಂಶವನ್ನು ತಿದ್ದುಪಡಿ ಮಾಡಲು ಅಪೇಕ್ಷೆ ಪಟ್ಟಲ್ಲಿ ತನ್ನ ಜೀವಿತ ಕಾಲದಲ್ಲಿ ತಿದ್ದುಪಡಿ ಮಾಡಬಹುದು. ಇದಕ್ಕೆ ಶಾಸನ ಅನುಬಂಧ ( Codicil)  ಎನ್ನುತ್ತಾರೆ.

ಪ್ರ 13

ಮರಣ ಶಾಸನ (ಇಚ್ಚಾಪತ್ರ) ಬರೆದಿಟ್ಟ ವ್ಯಕ್ತಿಯ ಮರಣಾ ನಂತರವು ನೋಂದಣಿ ಮಾಡಿಸಬಹುದೇ?

ಉತ್ತರ

ನೋಂದಣಿ ಮಾಡಿಸಬಹುದು. ಸದರಿ ಇಚ್ಛಾ ಪತ್ರದಂತೆ ಹಕ್ಕು ಸಾಧಿಸುವವರು ಮರಣ ಶಾಸನ ಬರೆದಿಟ್ಟ  ವ್ಯಕ್ತಿಯು ಮರಣ ಹೊಂದಿದ ಬಗ್ಗೆ  ದಾಖಲಾತಿ ಸಾಕ್ಷಿಗಳು ಹಾಗೂ ದಸ್ತಾವೇಜು ಬರೆದವರು ಸಾಕ್ಷಿ ಹಾಜರುಪಡಿಸಬೇಕು. ಮರಣ ಶಾಸನವನ್ನು ಸತ್ಯವಾಗಿ ಬರೆದುಕೊಡಲ್ಪಟ್ಟಿದೆ ಎಂದು ಉಪನೋಂದಣಾಧಿಕಾರಿಯವರಿಗೆ ಮನಗಂಡರೆ ನೋಂದಾಯಿಸುತ್ತಾರೆ.

ಪ್ರ 14

ಮರಣ ಶಾಸನ (ಇಚ್ಚಾಪತ್ರ) ನೋಂದಣಿ ಮಾಡಿಸಲು ತಗಲುವ ಮುದ್ರಾಂಕ ಶುಲ್ಕ ನೋಂದಣಿ ಶುಲ್ಕ ಎಷ್ಟು?

ಉತ್ತರ

ಮುದ್ರಾಂಕ ಶುಲ್ಕ ಇರುವುದಿಲ್ಲ.  ಮರಣ ಶಾಸನ  ಬರೆದ ವ್ಯಕ್ತಿಯು ಜೀವಿತ ಕಾಲದಲ್ಲಿ ನೋಂದಾಯಿಸಲಿಕ್ಕೆ ರೂ.200/- ನೋಂದಣಿ ಶುಲ್ಕ ಿರುತ್ತದೆ. ಮರಣಾ ನಂತರ ನೋಂದಾಯಿಸಲಿಕ್ಕೆ ರೂ.200/- ನೊಂದಿಗೆ ವಿಚಾರಣಾ ಫೀ ರೂ.250 ಹೆಚ್ಚಿಗೆ ಪಾವತಿ ಮಾಡಬೇಕು.

ಪ್ರ 15

ನೋಂದಣಿಯಾದ ಮರಣ ಶಾಸನ (ಇಚ್ಚಾಪತ್ರ) ನಕಲನ್ನು ಯಾರಾದರೂ ಪಡೆಯಬಹುದೇ?

ಉತ್ತರ

ಬರೆದು ನೋಂದಾಯಿಸಿದ ವ್ಯಕ್ತಿ ಬದುಕಿರುವರೆಗೆ ನಕಲನ್ನು  ಪಡೆಯುವ ಹಕ್ಕು  ಅವರಿಗೆ ಮಾತ್ರ ಿರುತ್ತದೆ. ಅವರ ಮರಣ ನಂತರ ಮರಣ ಹೊಂದಿದ ಬಗ್ಗೆ ಸೂಕ್ತ ದೃಢೀಕೃತ ದಾಖಲೆಗಳನ್ನು ಒದಗಿಸಿ ಯಾರಾದರೂ ಪಡೆಯಬಹುದು.

ಪ್ರ 16

ಮರಣ ಶಾಸನದಲ್ಲಿ ಬರೆದ ವಿಷಯವು ಯಾರಿಗೂ ತಿಳಿಯದಂತೆ ಗೌಪ್ಯವಾಗಿ ಇಡಲು ಹಾಗೂ ಸಂರಕ್ಷಿಸಲು ಏನು ಮಾಡಬೇಕು?

ಉತ್ತರ

ಬರೆದ ಮರಣ ಶಾಸನ (ಇಚ್ಚಾಪತ್ರ)  ಸೀಲು ಮಾಡಿದ ಲಕೋಟೆಯಲ್ಲಿ ಇಟ್ಟು ಜಿಲ್ಲಾನೋಂದಣಾಧಿಕಾರಿಯವರ ಕಛೇರಿಯಲ್ಲಿ ಠೇವಣ ಮಾಡಬಹುದು. ಠೇವಣಿ ಮಾಡಲು ರೂ.1000-00 ಫೀ ಪಾವತಿಸಬೇಕಾಗುತ್ತದೆ. ಹೀಗೆ ಠೇವಣಿ ಮಾಡಿದ ವ್ಯಕ್ತಿ ಅಥವಾ ಅವರಿಂದ ಸೂಕ್ತ ಅಧಿಕಾರ ಪಡೆದ ವ್ಯಕ್ತಿ ಅದನ್ನು ಹಿಂದಕ್ಕೆ ಪಡೆಯಲು ಅವಕಾಶವಿದೆ. ಠೇವಣಿ ಹಿಂದಕ್ಕೆ ಪಡೆಯಲು ರೂ.200-00 ಪಾವತಿ ಮಾಡಬೇಕಾಗುತ್ತದೆ.

ಪ್ರ 17

ಮರಣ ಶಾಸನವನ್ನು ಠೇವಣಿ ಇಟ್ಟ ವ್ಯಕ್ತಿಯು ಮೃತಪಟ್ಟಲ್ಲಿ ಮರಣ ಶಾಸನ ವನ್ನು ತೆರೆಯಿಸಲು ಯಾವ ಕ್ರಮಕೈಗೊಳ್ಳಬೇಕು?

ಉತ್ತರ

ಬರೆದಿಟ್ಟ ವ್ಯಕ್ತಿಯು ಮೃತಪಟ್ಟ ಬಗ್ಗೆ  ದಾಖಲೆ ಒದಗಿಸಿದರೆ ಜಿಲ್ಲಾನೋಂದಣಿ ಅಧಿಕಾರಿಯವರ ಅರ್ಜಿ ಸಲ್ಲಿಸಿದವರ ಸಮಕ್ಷಮದಲ್ಲಿ ಮೊಹರಾದ ಲಕೋಟೆಯನ್ನು  ತೆರೆದು ನೋಂದಣಿ ಮಾಡಿ ಇಚ್ಛಿಸಿದಲ್ಲಿ ಅದರ ನಕಲನ್ನು  ನೀಡುವರು. ಇದನ್ನ ನೀಡುವರು. ಇದನ್ನು  ತೆರೆದು ನೋಂದಾಯಿಸಲು ರೂ.100-00 ಪಾವತಿಸಬೇಕಾಗುತ್ತದೆ.

ಪ್ರ 18

ಮರಣ ಶಾಸನ ಪತ್ರ ದ ಮೂಲಕ ಪಡೆದ ಆಸ್ತಿಯ ಖಾತೆಯನ್ನು ವರ್ಗಾಯಿಸಿಕೊಳ್ಳುವ ಬಗೆ ಹೇಗೆ?

ಉತ್ತರ

ಮರಣ ಶಾಸನ ಪತ್ರ  ಬರೆದ ವ್ಯಕ್ತಿಯ ಮರಣ ನಂತರ ಮರಣ ದೃಢೀಕರಣ ಪತ್ರ ಹಾಗೂ ಅರ್ಜಿಯ ಜೊತೆ ಪ್ರಮಾಣ ಪತ್ರವನ್ನು ಮರಣ ಶಾಸನ ಪತ್ರದಲ್ಲಿ ನಮೂದಿಸಿದ ವ್ಯಕ್ತಿಯು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಿ ಆಸ್ತಿಯ ಖಾತೆಯನ್ನು ವರ್ಗಾಯಿಸಿಕೊಳ್ಳಬಹುದಾಗಿದೆ. 

ಪ್ರ 19

ಆಸ್ತಿಯ ಕ್ರಯ ಮಾಡಿಕೊಳ್ಳುವಾಗ ಮಾರಾಟಗಾರರ ಮತ್ತು ಖರೀದಿಸುವವರ ಹೊಣೆ ಹಾಗೂ ಕರ್ತವ್ಯಗಳೇನು?

ಉತ್ತರ

ಮಾರಾಟಗಾರ ಮತ್ತು ಖರೀದಿಸವವರಿಗೆ  ಕೆಳಕಂಡ ಹೊಣೆಗಳು ಹಾಗೂ ಕರ್ತವ್ಯಗಳು ಇರುತ್ತದೆ.

ಕ್ರಯವಾಗುವ ಮುನ್ನ ಹೊಣೆಗಳು

ಮಾರಾಟಗಾರರ ಹೊಣೆಗಳು

ಖರೀದಿಸುವವರ ಹೊಣೆಗಳು

ಆಸ್ತಿಯ ನ್ಯೂನತೆಗಳನ್ನು ತಿಳಿಸುವುದು

 

ಹಕ್ಕು ಪತ್ರಗಳನ್ನು ಒದಗಿಸುವದು

 

ಹಕ್ಕಿಗೆ  ಸಂಬಂಧಿಸಿದ ಪ್ರಶ್ನಿಗಳಿಗೆ ಉತ್ತರಿಸುವುದು

 

ಕ್ರಯಪತ್ರ ಬರೆದು ಕೊಡುವುದು

ಮೌಲ್ಯ ಪಾವತಿ ಮಾಡುವುದು

ಹೊಣೆಗಳನ್ನು ಸಂದಾಯ ಮಾಡುವುದು

 

ಹಕ್ಕುಗಳು

ಮಾರಾಟ ಮಾಡುವವರ ಹಕ್ಕು

ಖರೀದಿಸುವವರ ಹಕ್ಕು

ಬಾಡಿಗೆ ಮತ್ತು ಲಾಭಗಳನ್ನು ಪಡೆಯುವುದು

ಮೊದಲೇ ಸಂದಾಯವಾದ ಮೌಲ್ಯದ ಮೇಲೆ ಪ್ರಚಾರ

ಕ್ರಯ  ಪೂರ್ಣವಾದ ನಂತರ

ಮಾರಾಟ ಮಾಡಿದವರ ಹೊಣೆ

ಖರೀದಿಸಿದವರ ಹೊಣೆ

ಆಸ್ತಿಯ  ಸ್ವಾಧೀನ ಕೊಡುವುದು

ಆಸ್ತಿಯ ಸ್ವಾಧೀನ ಪಡೆದ ನಂತರ ಸ್ವತ್ತಿಗೆ ಆಗುವ ಆಕಸ್ಮಿಕ ಧಕ್ಕೆ, ನಾಶಕ್ಕೆ ಹೊಣೆಗಾರಿಕೆ

ಹಕ್ಕಿನ ಬಗ್ಗೆ ಮಾಹಿತಿ

ಮೌಲ್ಯ ಸ್ವೀಕರಿಸಿದ ನಂತರ ಹಕ್ಕು ಪತ್ರಗಳನ್ನು ಕೊಡುವುದು

ಸ್ವಾಧಿನ ಪಡೆದ ನಂತರ ಸ್ವತ್ತಿಗೆ ಸಂಬಂಧಿಸಿದ ಕರ ಮುಂತಾದ ಹೊಣೆಗಾರಿಕೆ ಪಾವತಿ ಮಾಡುವುದು

 

ಖರೀದಿ ಕೊಟ್ಟವರ ಹಕ್ಕು        ಖರೀದಿ ಪಡೆದವರ ಹಕ್ಕು

ಮೌಲ್ಯ ಪಾವತಿ ಬಾಕಿ ಉಳಿದಿದ್ದರೆ ಆಸ್ತಿಯ ಮೇಲೆ ಋಣಭಾರ

ಆಸ್ತಿಯ ವೃದ್ಧಿ / ಲಾಭದ ಹಕ್ಕು

 

 

ಇತ್ತೀಚಿನ ನವೀಕರಣ​ : 23-02-2024 04:52 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ನೋಂದಣಿ ಮತ್ತು ಮುದ್ರಾಂಕ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080